ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಮರ್, ಯೋಹನ್ ಜೇಕಬ್
ಬಾಮರ್, ಯೋಹನ್ ಜೇಕಬ್
1825-98. ಸ್ವಿಸ್ ಗಣಿತವಿದ ಮತ್ತು ಭೌತವಿಜ್ಞಾನಿ. ಸ್ವಿಟ್ಸರ್ಲೆಂಡಿನ ಬ್ಯಾಸೆಲ್-ಲ್ಯಾಂಡಿನಲ್ಲಿ ಜನನ (1-5-1825), ಬಾಸೆಲಿನಲ್ಲಿ ಮರಣ (1293-1898). ಗಣಿತದಲ್ಲಿ ಡಾಕ್ಟೊರೇಟ್ ಪಡೆದು (1849) ಶಾಲಾ ಶಿಕ್ಷಕ ವೃತ್ತಿ ಹಿಡಿದ. ಭೌತವಿಜ್ಞಾನದಲ್ಲಿ ಈತನ ಅನಂತರದ ದಿನಗಳಲ್ಲಿ ಬಾಮರನ ಸೂತ್ರವೆಂದು ಪ್ರಸಿದ್ಧವಾದ ಬೈಜಿಕ ಸೂತ್ರವನ್ನು ನೀಡಿದ (1885).
ಇಲ್ಲಿ λ ಹೈಡ್ರೊಜನ್ ರೋಹಿತದಲ್ಲಿ (ಸ್ಪೆಕ್ಟ್ರಮ್)ಕಂಡುಬರುವ ರೇಖೆಯ ಅಲೆಯುದ್ಧವನ್ನು ಆ್ಯಂಗ್ಸ್ಟ್ರಾಮ್ ಮಾನದಲ್ಲಿ ಪ್ರತಿನಿಧಿಸುತ್ತದೆ. n=2, m=3,4, 5…ಮತ್ತು h=3645.6x10-8 ಸೆಂಮೀ. ಇದೊಂದು ಅನುಭವಜನ್ಯ ಸೂತ್ರ. ಆ್ಯಂಗ್‍ಸ್ಟ್ರಾಮ್ ಪ್ರಾಯೋಗಿಕವಾಗಿ ವೀಕ್ಷಿಸಿದ್ದ ನಾಲ್ಕು ಹೈಡ್ರೋಜನ್ ರೋಹಿತ ರೇಖೆಗಳ ಅಲೆಯುದ್ದಗಳನ್ನು ಬಾಮರ್ ಈ ಸೂತ್ರದಿಂದ ಪರಿಕಲಿಸಿ ಅವು ವಾಸ್ತವ ಅಲೆಯುದ್ದಗಳೊಡನೆ ನಿಷ್ಕøಷ್ಟವಾಗಿ ಹೊಂದುತ್ತವೆ ಎಂದು ತೋರಿಸಿದ. ಮುಂದೆ ತನ್ನ ಸೂತ್ರದಿಂದ ಇನ್ನೂ ಅನೇಕ ಹೈಡ್ರೋಜನ ರೇಖೆಗಳ ಅಲೆಯುದ್ದಗಳನ್ನು ಪರಿಕಲಿಸಿದ. ಈ ರೇಖೆಗಳನ್ನು ಪ್ರಯೋಗಿಕವಾಗಿ ವೀಕ್ಷಿಸಿ ಸ್ಥಿರೀಕರಿಸಲಾಯಿತು. ಇವು ಪರಿಕಲಿತ ಅಲೆಯುದ್ದಗಳೊಡನೆ 1000ದಲ್ಲಿ 1 ಭಾಗದಷ್ಟು ನಿಖರತೆಯಿಂದ ಹೊಂದುತ್ತಿದ್ದುವು. ಬಾಮರನ ಸೂತ್ರ ಮುಂದೆ ಇನ್ನೂ ಅನೇಕ ಪರಮಾಣುಗಳ ರೋಹಿತ ರೇಖೆಗಳನ್ನು ಕುರಿತಂತೆ ಕೂಡ ಇಂಥ ಅನುಭವಜನ್ಯ ಸೂತ್ರಗಳಿಗೆ ಎಡೆ ಹಾಸಿಕೊಟ್ಟಿತು. ಸ್ವತಃ ಬಾಮರನೇ ತನ್ನ ಸೂತ್ರದಲ್ಲಿ ಟಿಗೆ 2 ಕ್ಕಿಂತ ಭಿನ್ನ ಪೂರ್ಣಾಂಕಗಳನ್ನು ಕೊಡುತ್ತ ಹೋದರೆ ಹೈಡ್ರೊಜನ್ ಪರಮಾಣುವಿನ ಅತಿ ನೇರಳೆ ಮತ್ತು ಅತಿರಕ್ತ ರೋಹಿತರೇಖೆಗಳು ದೊರೆಯುತ್ತವೆಂದು ಪ್ರತಿಪಾದಿಸಿದ. ಮುಂದೆ ಇವೇ ಲೈಮಾನ್, ಪಾಶ್ಚನ್, ಬ್ರ್ಯಾಕೆಟ್ ಮತ್ತು ಫಂಡ್ ಶ್ರೇಣಿಗಳೆಂದು ಪ್ರಸಿದ್ಧಿ ಪಡೆದುವು. ಬಾಮರನ ಸೂತ್ರವನ್ನೇ ಮಾದರಿಯಾಗಿಟ್ಟುಕೊಂಡು ರಿಡ್ಬರ್ಗ್, ಕೈಸರ್ ಮತ್ತು ರುಂಗೆ ಅವರು ಇನ್ನೂ ಹೆಚ್ಚು ವ್ಯಾಪಕ ಶ್ರೇಣಿಸೂತ್ರಗಳನ್ನು ಕೊಟ್ಟರು. (ವಿ.ಎಂ.ಕೆ.)