ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಮೇದಕ

testwikiದಿಂದ
ಬದಲಾವಣೆ ೦೭:೩೪, ೨೯ ಮೇ ೨೦೧೪ ರಂತೆ imported>Geetha gowda ಇವರಿಂದ (ಹೊಸ ಪುಟ)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಆದರ್ಶೀಕೃತ ರಾಸಾಯನಿಕ ಸೂತ್ರ ZrSiO4 (ಜ಼ಿರ್ಕೋನಿಯಂ ಸಿಲಿಕೇಟ್) ಇರುವ ಒಂದು ಖನಿಜ (ಜ಼ಿರ್ಕಾನ್). ನವರತ್ನಗಳಲ್ಲಿ ಒಂದು. ಜ಼ಿರ್ಕೋನಿಯಮ್ ಧಾತುವಿನ ಬಲುಮುಖ್ಯ ಆಕರ. ಇದರ ರಾಸಾಯನಿಕ ಸಂಯೋಜನೆಯಲ್ಲಿ ಅಲ್ಪ ಮೊತ್ತದಲ್ಲಿ ಯುರೇನಿಯಮ್ ಪ್ರವೇಶಿಸಿದರೆ ಅದಕ್ಕೆ ಸಿರ್ಟೊಲೈಟ್ ಎಂದು ಹೆಸರಾಗುತ್ತದೆ.


ಗೋಮೇದಕ ಚತುಷ್ಕೋಣೀಯ (ಟೆಟ್ರಾಗೊನಲ್) ವರ್ಗದ ಹರಳುಗಳಾಗಿ ಚತುರ್ಮುಖ ಅಥವಾ ಅಷ್ಟಮುಖಗಳ ಪ್ರಿಸಮ್ಗಳಂತೆ ರೂಪುಗೊಳ್ಳುತ್ತದೆ. ಪ್ರಿಸಮ್ಗಳ ತುದಿಗಳು ಪಿರಮಿಡ್ಡುಗಳಂತೆ ಮೊನಚಾಗಿ ಮಾರ್ಪಡುತ್ತವೆ. ಅವಳಿಗಳಾಗಿ ಬೆಳೆಯುವ ಕೆಲವು ಹರಳುಗಳು ಬಗ್ಗಿದ ಮೊಣಕಾಲಿನ ರೂಪವನ್ನು ಪಡೆಯುತ್ತವೆ. ಸರ್ವ ಸಾಮಾನ್ಯವಾಗಿ ದೊರೆಯುವ ಗೋಮೇದಕ ಸ್ವಚ್ಛವಾಗಿರುವುದಿಲ್ಲ. ಅಚ್ಚ ಹೊಳಪನ್ನುಳ್ಳ ಅಚ್ಚಗೆಂಪು, ಕಿತ್ತಳೆ ಕೆಂಪು ಇಲ್ಲವೆ ಹಳದಿ ಬಣ್ಣಗಳಿಂದ ಕೂಡಿ ಪಾರದರ್ಶಕತೆಯುಳ್ಳ ಹೈಯಾಸಿಂತ್ ಎಂಬ ಅಪರೂಪದ ಗೋಮೇದಕಗಳು ಬೆಲೆಬಾಳುವ ರತ್ನಗಳು. ಕಾಯಿಸುವುದರಿಂದ ಗೋಮೇದಕದ ಬಣ್ಣ ಮಾಯವಾಗುತ್ತದೆ. ನಿರ್ಮಲವಾದ ಗೋಮೇದಕ ವಜ್ರಕ್ಕೆ ಸಮವಾದ ಹೊಳಪನ್ನು ಬೀರಿದರೆ ಅದಕ್ಕೆ ಮಟುರಾ ವಜ್ರವೆನ್ನುತ್ತಾರೆ. ಇದನ್ನು ಒಡೆದಾಗ ಶಂಖಾಕೃತಿಯ ಸೀಳುಗಳನ್ನು ಕಾಣಬಹುದು. ಇದರ ಕಠಿಣತೆ 7.5, ಸಾಪೇಕ್ಷ ಸಾಂದ್ರತೆ 4.7.


ರತ್ನ ಜಾತಿಗೆ ಸೇರಿದ ಗೋಮೇದಕಗಳು ಶ್ರೀಲಂಕ, ಇಂಡೊಚೀನ, ಆಸ್ಟ್ರೇಲಿಯ, ರಷ್ಯ, ಆಗ್ನೇಯ ಏಷ್ಯ, ಇಟಲಿ ಮೊದಲಾದ ದೇಶಗಳಲ್ಲಿ ದೊರೆಯುತ್ತವೆ. ಗೋಮೇದಕದ ಗಣಿಗಾರಿಕೆಯಲ್ಲಿ ಆಸ್ಟ್ರೇಲಿಯ ಮುಂಚೂಣಿಯಲ್ಲಿದೆ (37%). ಭಾರತದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಒರಿಸ್ಸ ರಾಜ್ಯಗಳಲ್ಲಿನ ಸಮುದ್ರತೀರದಲ್ಲಿರುವ ಮರಳಿನಲ್ಲೂ ಇವು ಹೇರಳ. ಗೋಮೇದಕ ಸಾಮಾನ್ಯವಾಗಿ ಅಗ್ನಿಶಿಲೆಗಳಾದ ಗ್ರಾನೈಟ್, ಸೈನೈಟ್ ಮತ್ತು ಪೆಗ್ಮೆಟೈಟ್ ಶಿಲೆಗಳಲ್ಲಿ ಉಪಖನಿಜವಾಗಿ ಭೂಮಿಯ ನಾನಾ ಭಾಗಗಳಲ್ಲಿ ಉತ್ಪತ್ತಿಯಾಗಿರುತ್ತದೆ. ಆಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯ ಸೈನೈಟ್ ಶಿಲೆಗಳಲ್ಲಿ ಅಸ್ಪಷ್ಟವಾದ ಹರಳುಗಳು ಸಾಕಷ್ಟು ಮೊತ್ತದಲ್ಲಿ ದೊರೆಯುತ್ತವೆ.